ಚಿಪ್ಪುಹಂದಿ
ಫಾಲಿಡೋಟ ಗಣದ ಮ್ಯಾನಿಡೀ ಕುಟುಂಬಕ್ಕೆ ಸೇರಿದ ಒಂದು ವಿಚಿತ್ರ ಬಗೆಯ ಸ್ತನಿ (ಸ್ಕೇಲಿ   ಆಂಟ್ ಈಟರ್, ಪ್ಯಾಂಗೋಲಿನ್). ಮೈಮೇಲಿನ ಚಿಪ್ಪಿನ ರೀತಿಯ ದೊಡ್ಡ ದೊಡ್ಡ ಶಲ್ಕ ಅಥವಾ ಹುರುಪೆಗಳಿರುವುರಿಂದಲೂ ಇದು ಇರುವೆ, ಗೆದ್ದಲು ಮುಂತಾದ ಕೀಟಗಳನ್ನು ತಿನ್ನುವುದರಿಂದಲೂ ಇದಕ್ಕೆ ಸ್ಕೇಲಿ ಆಂಟ್ ಈಟರ್ ಎಂಬ ಹೆಸರು ಬಂದಿದೆ. ಮ್ಯಾನಿಸ್ ಇದರ ಶಾಸ್ತ್ರೀಯ ಹೆಸರು. ಸುಮಾರು 11\2'-2' ಉದ್ದದ ಪ್ರಾಣಿ. ತಲೆ ಚಿಕ್ಕದು; ಅದರ ಆಕಾರ ಶಂಕುವಿನಂತೆ. ಕಣ್ಣು ಹಾಗೂ ಕಿವಿಗಳು ಸಣ್ಣವು. ಹೊಟ್ಟೆಯನ್ನು ಬಿಟ್ಟು ದೇಹದ ಉಳಿದ ಭಾಗದಲ್ಲೆಲ್ಲ ಮನೆಗೆ ಹೊದಿಸುವ ಹೆಂಚುಗಳಂತೆ ಜೋಡಣೆಗೊಂಡಿರುವ ಹುರುಪೆಗಳ ಹೊದಿಕೆಯಿದೆ. ಕೊಂಬಿನಂಥ ವಸ್ತುವಿನಿಂದ ಕೂಡಿದ ಈ ಹುರುಪೆಗಳು ಬಹುಶಃ ಕೂದಲುಗಳೆಲ್ಲ ಕೂಡಿಕೊಂಡು ಜಡ್ಡುಗಟ್ಟಿ ಉಂಟಾಗಿರಬಹುದೆಂದು ಭಾವಿಸಲಾಗಿದೆ. ಹುರುಪೆಗಳ ಮಧ್ಯೆ ಹಾಗೂ ದೇಹದ ಕೆಳಬಾಗದಲ್ಲಿ ನಿಬಿಡವಾದ ಕೂದಲುಗಳಿವೆ. ಚಿಪ್ಪು ಹಂದಿಯ ಮುಂಗಾಲುಗಳು ಹಿಂಗಾಲುಗಳಿಗಿಂತ ಸ್ವಲ್ಪ ಉದ್ದ. ಪ್ರತಿಯೊಂದು ಪಾದದಲ್ಲೂ ಉದ್ದವಾದ ಹಾಗೂ ಬಾಗಿರುವ ಮತ್ತು ಮೊನಚಾದ ಉಗುರುಗಳುಳ್ಳ 5 ಬೆರಳುಗಳಿವೆ. ಮುಂಗಾಲಿನ ಉಗುರುಗಳು ಹೆಚ್ಚು ಉದ್ದ ಉಂಟು. ಹಲ್ಲುಗಳಿಲ್ಲದಿರುವುದು ಚಿಪ್ಪು ಹಂದಿಯ ಸೋಜಿಗದ ಲಕ್ಷಣಗಳಲ್ಲೊಂದು. ತನ್ನ ನಾಲಗೆಯನ್ನು ಬಲು ಉದ್ದವಾಗಿ ಚಾಚಬಲ್ಲದು. ಅಲ್ಲದೆ ನಾಲಗೆ ಬಹಳ ಅಂಟು ಅಂಟಾಗಿದೆ. ತನ್ನ ತೀಕ್ಷ್ಣವಾದ ಘ್ರಾಣಶಕ್ತಿಯಿಂದ ಹುತ್ತ ಮತ್ತು ಇರುವೆಗೂಡುಗಳನ್ನು ಮೂಸುತ್ತ ಕೀಟಗಳ ಇರವನ್ನು ಪತ್ತೆಹಚ್ಚಿ, ಮುಂಗಾಲುಗಳ ಉಗುರುಗಳಿಂದ ಗೂಡುಗಳನ್ನು ಕೆದಕಿ ತನ್ನ ಉದ್ದನಾಲಗೆಯನ್ನು ಒಳಚಾಚಿ ಅಲುಗಾಡಿಸಿ, ನಾಲಗೆಗೆ ಅಂಟಿಕೊಳ್ಳುವ ಇರುವೆಗಳನ್ನು ಬಾಯೊಳಕ್ಕೆ ಸಾಗಿಸುತ್ತದೆ. ಇದರ ವಾಸವೆಲ್ಲ ನೆಲದಲ್ಲಿ ಕೊರೆದು ರಚಿಸಿದ ಬಿಲಗಳಲ್ಲಿ. ಕೆಲವೊಮ್ಮೆ ಮರಗಳಲ್ಲಿನ ಪೊಟರೆಗಳಲ್ಲೂ ವಾಸಿಸುವುದುಂಟು. ಹಗಲೆಲ್ಲ ಬಿಲದಲ್ಲಿ ತನ್ನ ದೇಹವನ್ನು ಚಂಡಿನಂತೆ ಸುತ್ತಿಕೊಂಡು ನಿದ್ರಿಸುತ್ತಿದ್ದು ರಾತ್ರಿಯವೇಳೆ ಇರುವೆಗಳ ಬೇಟೆಗೆ ಹೊರಡುತ್ತದೆ. ಶತ್ರುಗಳಿಂದ ಆವರಿಸಲ್ಪಟ್ಟ್ಟಾಗಲೂ ಹೀಗೆ ದೇಹವನ್ನು ಚಂಡಿನಂತೆ ಸುತ್ತಿಕೊಂಡು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತದೆ.

ಚಿತ್ರ ಮ್ಯಾನಿಸ್ ಜವಾನಿಕ ಪ್ರಭೇದ. ಒಳಚಿತ್ರದಲ್ಲಿ ಚಿಪ್ಪನ್ನು ತೋರಿಸಿದೆ.
  	
ಚಿಪ್ಪು ಹಂದಿ ಏಷ್ಯ ಮತ್ತು ಆಫ್ರಿಕದಲ್ಲಿ ಮಾತ್ರ ಕಾಣಸಿಗುತ್ತದೆ. ಗಾತ್ರ ಹಾಗೂ ಹುರುಪೆಗಳ ಜೋಡಣೆಯ ರೀತಿಯನ್ನು ಆಧರಿಸಿ ಚಿಪ್ಪು ಹಂದಿಯಲ್ಲಿ 7 ಪ್ರಭೇದಗಳನ್ನು ಗುರುತಿಸಲಾಗಿದೆ. ಏಷ್ಯದಲ್ಲಿ ಮೂರು ಮತ್ತು ಆಫ್ರಿಕದಲ್ಲಿ ನಾಲ್ಕು ಪ್ರಭೇದಗಳು ಇವೆ. ಏಷ್ಯದಲ್ಲಿ ಕಾಣಬರುವ ಬಲುಸಾಮಾನ್ಯ ಪ್ರಭೇದ ಮ್ಯಾನಿಸ್ ಪೆಂಟದ್ಯಾಕ್ಟಿಲ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ